ಮುನ್ನುಡಿ .
ನಾಡಿನ ಕವಿಗಳ 'ಹನಿಗೊಂಚಲು'
***********************
ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ಬಾಗಲಕೋಟೆಯ ಸಾಹಿತ್ಯ ವಲಯದಲ್ಲಿ ತಮ್ಮ ಸರಳ ವ್ಯಕ್ತಿತ್ವ ಮತ್ತು ಕಾಯಕ ನಿಷ್ಠೆಯಿಂದ ಗುರುತಿಸಿಕೊಂಡಿರುವ ಎ. ಎಂ. ಬಿರಾದಾರ ಅವರು ವೃತ್ತಿಯಿಂದ ರೇಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅವರ ಪ್ರವೃತ್ತಿ ಸಾಹಿತ್ಯ ರಚನೆ ಮತ್ತು ಸಾಹಿತ್ಯದ ಓದು. ಅವರ ಸಂಪಾದಕತ್ವದಲ್ಲಿ ಹೊರಬಂದಿರುವ `ಹನಿಗೊಂಚಲು' ಚುಟುಕು ಸಂಕಲನಕ್ಕೆ ತನ್ನದೇಯಾದ ವೈಶಿಷ್ಟ್ಯತೆ ಇದೆ. ಸಂಕಲನದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳ ಮತ್ತು ಹೊರನಾಡ ಕನ್ನಡಿಗ ಕವಿ ಕವಿಯತ್ರಿಯರ ಚುಟುಕುಗಳಿವೆ. ಹೀಗೆ ರಾಜ್ಯದ ಕವಿ ಕವಿಯಿತ್ರಿಯರ ಚುಟುಕುಗಳನ್ನು ಒಂದೆಡೆ ಸಂಕಲಿಸಿಕೊಡುವ ಸಾಧನೆಯ ಹಿಂದೆ ಮೂರು ರೀತಿಯ ಶ್ರಮವಿದೆ.
ಇಂಥದೊಂದು ಸಂಕಲನ ತರುವಲ್ಲಿ ಮೊದಲು ಮಾಧ್ಯಮಗಳ ಮೂಲಕ ಕವಿಗಳಿಗೆ ಚುಟುಕು ಕಳಿಸಲು ಮುಕ್ತ ಆಹ್ವಾನ ನೀಡಬೇಕು. ಹೀಗೆ ಆಹ್ವಾನಕ್ಕೆ ಪ್ರತಿಯಾಗಿ ಬರುವ ಆಸಕ್ತರ ನೂರಾರು ಕವಿತೆಗಳನ್ನು ಒಂದೆಡೆ ಸಂಕಲಿಸಿ ಸಿದ್ಧಪಡಿಸಿ ಅವರಿಗೆ ಆಯ್ಕೆ ಕುರಿತು ಬರೆಯಬೇಕು. ಹೀಗೆ ಬರೆದಾಧ ಮೇಲೆ ಕವಿಗಳ ಕುತೂಹಲವನ್ನು ಬಹಳಷ್ಟು ದಿನ ಕಾಯಿಸದೆ ಸಂಕಲನವನ್ನು ಮುದ್ರಣಕ್ಕೆ ತಂದು ಮುದ್ರಿಸಿ ಮತ್ತೆ ಅವರಿಗೆ ತಲುಪಿಸಬೇಕು. ಈ ಎಲ್ಲ ಶ್ರಮಗಳನ್ನು ನೀಗಬಲ್ಲವರು ಮಾತ್ರ ಇಂಥ ಕಾರ್ಯದಲ್ಲಿ ಜಯಶಾಲಿಗಳಾಗುತ್ತಾರೆ. ಈ ಜಯದ ಹಿಂದೆ ಕನ್ನಡವನ್ನು ಕಟ್ಟುವ ಕಾಯಕವೂ ಸದ್ದಿಲ್ಲದೆ ನಡೆದು ಹೋಗುತ್ತದೆ.
ಬಿರಾದಾರ ಅವರ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತವರು ಡಾ. ಮೈನುದ್ದೀನ ರೇವಡಿಗಾರ ಅವರು. ಈ ಹಿಂದೆ ಬಾಗಲಕೋಟೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದ ನೆನಪಿಗಾಗಿ ಇಂಥದೊಂದು ಸಂಕಲನವನ್ನು ಡಾ.ಮೈನುದ್ದೀನ ರೇವಡಿಗಾರ ಅವರು ತಂದು ನಮಗೆಲ್ಲ ಮಾದರಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಎ. ಎಂ. ಬಿರಾದಾರ ಅವರು ಹೊರತರುತ್ತಿರುವ ಈ `ಹನಿಗೊಂಚಲು' ಗರ್ಭದಲ್ಲಿ ರಾಜ್ಯದ ಕವಿ ಕವಿಯಿತ್ರಿಯರ ಕೆನೆಗಟ್ಟಿದ ಸವಿ ಸವಿಯಾದ ತಾಜಾ ಅನುಭವಗಳಿವೆ.
ಒಂದು ಕಾಲಕ್ಕೆ ಕೇವಲ ಪತ್ರಿಕೆಗಳಲ್ಲಿ ಖಾಲಿ ಉಳಿದ ಸ್ಥಾನವನ್ನು ತುಂಬಬಲ್ಲ ರಚನೆಗಳು ಎನಿಸಿದ್ದ ಈ ಬಗೆಯ ಸಾಹಿತ್ಯ ಇವತ್ತು ಒಂದು ಪ್ರಕಾರವಾಗಿ ಗುರುತಿಸಿಕೊಳ್ಳುತ್ತಿರುವುದನ್ನು ನಾವು ಕಾಣುತ್ತೇವೆ. ಚುಟುಕು ಸಾಹಿತ್ಯ ರಚನೆಯ ದೆಸೆಯಲ್ಲಿ ಆಕರ್ಷಿತರಾಗುತ್ತಿರುವ ಬರಹಗಾರರೊಂದಿಗೆ ಓದುಗ ಓದಬಲ್ಲ ರಚನೆಗಳನ್ನು ಬಯಸುತ್ತಿರುವುದರಿಂದ ಚುಟುಕು ರಚನೆಗಳ ಸುಗ್ಗಿ ಭರ್ಜರಿಯಾಗಿಯೇ ನಡೆಯುತ್ತಿದೆ.
ಚುಟುಕು ಕವಿತೆಗಳ ಆಕರ್ಷಣೆಗೆ ಅದರ ಆಕೃತಿ ಮತ್ತು ನೇರವಾದ ನಡೆಯೇ ಪ್ರಧಾನ ಕಾರಣ. ಕೆಲ ಸಾಲುಗಳಲ್ಲಿಯೇ ಕವಿ ಹೇಳಬಲ್ಲ ಸಂಗತಿಯನ್ನು ಆಕರ್ಷಕವಾಗಿ ಮನ ಮುಟ್ಟುವಂತೆ ಹೇಳುವುದು ಇದರ ವೈಶಿಷ್ಟ್ಯತೆ. ಈ ಬಗೆಯ ರಚನೆಗಳಿಗೆ ಸೀಮೆ ಗಡಿಗಳ ಕಟ್ಟಳೆ ಇಲ್ಲ. ಯಾರು ಬೇಕಾದರೂ ಯಾವುದೇ ರೀತಿಯಲ್ಲಿ ಯಾವುದೇ ವಸ್ತುವನ್ನು ಇಟ್ಟುಕೊಂಡು ಹೇಳಬಹುದಾಗಿದೆ. ಆದರೆ ಅದು ಸಹೃದಯರನ್ನು ಕೆಲಕ್ಷಣ ಚಿಂತನೆಗೆ ತೊಡಗಿಸಬೇಕು.`ಹನಿಗೊಂಚಲು' ಸಂಕಲನದಲ್ಲಿ ವೈವಿಧ್ಯಮಯ ರಚನೆಗಳಿವೆ. ಪ್ರೀತಿ, ಪ್ರೇಮ, ವಿರಹ, ರಾಜಕಾರಣ, ಶಿಕ್ಷಣ, ವೈದ್ಯಕೀಯ ಹೀಗೆ ಹಲವು ವಿಧದಲ್ಲಿ ಇಲ್ಲಿನ ಚುಟುಕುಗಳು ಸಂಕಲಿತಗೊಂಡಿವೆ. ಇಲ್ಲಿನ ಬಹಳಷ್ಟು ಕಾವ್ಯಗಳ ದ್ರವ್ಯ ಪ್ರೀತಿ ಪ್ರೇಮದ ಬಗೆಗೆ ಇದ್ದರೂ ಪ್ರಕೃತಿಯ ವರ್ಣನೆ, ವಾಸ್ತವಿಕ ಬದುಕಿನ ಚಿಂತನೆ ಮತ್ತು ಪ್ರಸ್ತುತ ಸಾಮಾಜಿಕ ತಲ್ಲಣಗಳನ್ನು ಕಂಡರಿಸಿವೆ.ದಿನ ನೂಕುವ ಪ್ರಕೃತಿಯ ಚಲನೆಯನ್ನು ಒಂದು ಎಳೆಯಲ್ಲಿ ಪೋಣಿಸಿಕೊಡುವ ಅನ್ನಪೂರ್ಣ ಟಿ. ಜಿ. ಅವರ ಚುಟುಕು ಹೀಗಿದೆ-
ಏನನ್ನು ಸಾರುತಿದೆ
ಪ್ರಕೃತಿಯ ನಾಮ
ಖಿನ್ನತೆಯಿಂದ ಪ್ರಸನ್ನತೆಗೆ
ಆಕೃತದಿಂದ ಕೃತದೆಡೆಗೆ
ತಿರುಗು ಎಂಬ ನಿಯಮ
ಅದರಂತೆ ಮಳೆ ಹನಿಗೆ ಮುದಗೊಳ್ಳುವ ಪ್ರಕೃತಿಯ ಪದರು ಪದರುಗಳಲ್ಲಿನ ರೋಮಾಂಚನವನ್ನು ಜಯಲಕ್ಷ್ಮೀ ಎಸ್. ರಾವ್ ಕಂಡರಿಸುವುದು ಹೀಗೆ-
ಬಿಸಿಲ ಬೇಗೆಯಳಿದು
ಆರಂಭವಾಯಿತು ಮಳೆ ಹನಿಯ ಸಿಂಚನ
ಧರೆಯ ತಾಪವಳಿದು
ಭೂರಮೆಯ ಒಡಲೆಲ್ಲ ರೋಮಾಂಚನ
ಮೇಲಿನ ಸೂರ್ಯ, ಕೆಳಗಿನ ಭೂಮಿ ಅದೊಂದು ರೀತಿಯಲ್ಲಿ ಕವಿ ಕಾಣುವ ಬಗೆಯೇ ಬೇರೆ. ಇಲ್ಲಿ ದೋಸಾತ್ ಡಿ. ಆಲ್ಮೇಡಾ ರವಿಯನ್ನು ಕೆಣಕುವುದು ಹೀಗೆ-
ನೋಡಿರಿ ಈ
ನಾಚಿಕೆಗೇಡಿ ರವಿಯನ್ನು
ಚುಂಬಿಸುತ್ತಿದ್ದಾನಲ್ಲ
ಎಡಬಿಡದೆ
ಮುಂಜಾವಿನಿಂದ ಮುಸ್ಸಂಜೆಯವರೆಗೆ
ಭೂಮಿಯನ್ನು
ಪ್ರಕೃತಿಯನ್ನು ಕವಿ ಕಾಣುವ ನೋಟದಲ್ಲಿ ತುಂಬಾ ಆತ್ಮೀಯವಾದ ಮತ್ತು ಪ್ರೀತಿ ಪೂರ್ವಕ ಅನುಭವವಿದೆ.`ಹನಿಗೊಂಚಲು' ಸಂಕಲನದಲ್ಲಿ ಇಂದಿನ ಸಾಮಾಜಿಕ ವ್ಯವಸ್ಥೆಯನ್ನು, ಅಲ್ಲಿನ ದುರುಳತನವನ್ನು ಬಹಳಷ್ಟು ರಚನೆಗಳು ಬಯಲಿಗೆಳೆಯುತ್ತವೆ. ಕೆ. ಆರ್. ಉಷಾ ಅವರ-
ಅಂದಿನ ವೈದ್ಯ
ಧನ್ವಂತರಿ
ಇಂದಿನ ವೈದ್ಯ
ಧನವಂತಾ-ರಿ
ಎಂಬಲ್ಲಿ ಪದ ಬಳಕೆಯ ಚಾಕ-ಚಕ್ಯತೆಯಲ್ಲಿಯೇ ಧನ್ವಂತರಿ-ಧನಾವಂತಾ-ರಿ ಎಂಬಲ್ಲಿ ಚುಟುಕುಗಳಿಗಿರುವ ಕುಟುಕು ಗುಣವನ್ನು ಪ್ರಕಟವಾಗುತ್ತದೆ.ಪ್ರೀತಿ, ಪ್ರೇಮ, ಸೆಡವು, ಮುನಿಸು, ದಾಂಪತ್ಯ ಬದುಕಿನ ಆಪ್ತ ಅನುಭವಗಳು ಇವನ್ನು ಕವಿ ಕಟ್ಟಿಕೊಡುವಲ್ಲಿ ಮುಜುಗರ ಪಟ್ಟುಕೊಳ್ಳದಿರುವುದು ಇಲ್ಲಿನ ಅನುಭವಗಳ ಹಿಂದಿರುವ ಸಾರ್ವತ್ರಿಕತೆಯೇ ಕಾರಣವಾಗಿದೆ. ಉಮೇಶ ತಿಮ್ಮಾಪುರ ಅವರ-
ಎಷ್ಟು ಹೊದ್ದರೂ
ಹೋಗಲಿಲ್ಲ
ಈ ಹಾಳು ಚಳಿ
ಅದಕ್ಕಾಗಿ
ಮುನಿಸಿಕೊಂಡರೂ
ನುಸುಳಿದ ಅವಳ ಬಳಿ
ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಎಂಬ ತುಂಬಾ ಜನಪ್ರಿಯವಾಗಿರುವ ನಾಣ್ಣುಡಿಯ ಎಳೆ ಈ ಕವಿತೆಯನ್ನು ಸ್ತುತಿಕೊಂಡಿದೆÉ. ಶಿವಾನಂದ ಪೂಜಾರಿಯವರ-
ಸೆಖೆಯಾದಾಗ
ನನ್ನವಳು
ಫ್ಯಾನ್ ಆಗುವಳು
ಬಹಳ ಹೊತ್ತು
ಸುತ್ತಿದರೆ
ಕಾವಾಗುವಳು
ಎಂಬಲ್ಲಿ ಹನಿಗವಿತೆಗಳಿಗಿರುವ ತೀವ್ರವಾದ ಸೆಳೆತ, ಸಾಲುಗಳಲ್ಲಿರುವ ಜೀವಂತಿಕೆ ಬಹಳ ಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ.ಸಂಕಲನದಲ್ಲಿನ ಶ್ರೀಮತಿ ಎಂ. ಆರ್. ಗುದಿಗೇನವರ ಅವರ ಶಿಲ್ಪಿ ಚುಟುಕು ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿನ ಅಸಹಾಯಕತೆಯನ್ನು ಸಾರುತ್ತದೆ.
ಶಿಲ್ಪಿ ನೀನೆಂದು
ಸಿಕ್ಕ ಕಲ್ಲುಗಳ ಕೈಗೆ ಕೊಟ್ಟರೆ
ಎಲ್ಲದರಲೂ
ನಾ ಮೂರ್ತಿ ಕೆತ್ತಬಲ್ಲೆನೇ
ಮೃದು ಮೇಣದ ಕಲ್ಲಾದರೆ
ಬಗೆ ಬಗೆಯ ಸುಂದರ
ಭಂಗಿಗಳ ಕಟೆದು
ಭಾವ ಬಿಂಬಿಸಬಲ್ಲೆನು
ಆದರೆ.....
ಒಂದು ಉಳಿಯ ಹೊಡೆತಕೆ
ಹಿಟ್ಟುಗಲ್ಲಾದರೆ
ಅದರಲಿ ನಾ ಹೇಗೆ ಮೂರ್ತಿ ಕೆತ್ತಲಿ
ಜೀವ ಕಳೆ ತುಂಬಲಿ
ಎಂಬಲ್ಲಿ ವ್ಯವಸ್ಥೆಯಲ್ಲಿನ ಗಟ್ಟಿಗೊಳ್ಳದ ಬೇರುಗಳನ್ನು, ಬೆಳೆಯಲಾಗದ ಮರಗಳನ್ನು, ಚಿಗುರಲಾರದ ಕೊರಡನ್ನು ಹೀಗೆ ಒಂದು ಸಾಮಾಜಿಕ ಮುಖವನ್ನು ಒಟ್ಟಂದದಲ್ಲಿ ತೋರಲಾಗದ ವಿಫಲತೆಯ ಬಗೆಗೆ ಆತಂಕವಿದೆ.
ಒಟ್ಟಾರೆ ಇಲ್ಲಿನ ಬಹಳಷ್ಟು ಚುಟುಕುಗಳು ಪದ ಬಳಕೆಯ ಶೈಲಿಯ ಚೆಂದದಿಂದ ಆಯ್ದುಕೊಂಡ ವಿಷಯ ವಸ್ತುವಿನ ಸಾರ್ವತ್ರಿಕತೆಯಿಂದ ಚಿಂತನೆಗೆ ತೊಡಗಿಸುವ ಗಟ್ಟಿತನದಿಂದ ತೀವ್ರವಾಗಿ ಗಮನ ಸೆಳೆಯುತ್ತವೆ. ಚುಟುಕುಗಳ ಕುರಿತು ಅಧ್ಯಯನ ನಡೆಸುವ ಕನ್ನಡ ಅಭ್ಯಾಸಿಗಳಿಗೆ ಎ. ಎಂ. ಬಿರಾದಾರ `ಹನಿಗೊಂಚಲು' ಮೂಲಕ ಒಂದು ವಿಶಿಷ್ಟವಾದ ಜೇನುಗೂಡು ಕಟ್ಟಿಕೊಡುತ್ತಾರೆ. ರಾಜ್ಯದ ನಾನಾ ಮೂಲೆಗಳ ಹೂ ಪರಿಮಳಗಳ ಸವಿ ಹೊತ್ತು ಒಂದೆಡೆ ಕೂಡಿ ಜೇನಾಗಿ ಸವಿಯಾಗಿ ಬೆರೆತುಕೊಂಡಿರುವ ಈ `ಹನಿಗೊಂಚಲು' ನಾಡವರ ಬಾಯಲ್ಲಿ ಸವಿಯುಣಿಸುವ ಸಾರ್ಥಕತೆಯಲ್ಲಿ ಬಿರಾದಾರ ಅವರ ಶ್ರಮದ ಹೆಚ್ಚುಗಾರಿಕೆ ಇದೆ. ಈ ಕಾರ್ಯಕ್ಕಾಗಿ ಅವರನ್ನು ನಾನು ಹೃದಯತುಂಬಿ ಶುಭ ಹಾರೈಸುತ್ತೇನೆ.*
· ಡಾ. ಪ್ರಕಾಶ ಗ. ಖಾಡೆ
Posಣeಜ bಥಿ ಆಡಿ.Pಡಿಚಿಞಚಿsh ಉ. ಏhಚಿಜe ಚಿಣ 05:08
No comments:
Post a Comment