ಮುನ್ನುಡಿ
‘ವಚನಜ್ಯೋತಿ’ - ಜ್ಯೋತಿಬಾ ಅವತಾಡೆ
ಕನ್ನಡ ಆಧುನಿಕ ವಚನಕಾರರ ಸಾಲಿನಲ್ಲಿ ಈಗ ಹೊಸ ಸೇರ್ಪಡೆ ಬೀಳಗಿಯ ಕವಿ ಜ್ಯೋತಿಬಾ ಅವತಾಡೆಯವರು. ಅವರ 108 ವಚನಗಳ ‘ವಚನಜ್ಯೋತಿ’ ಜ್ಯೋತಿರ್ಲಿಂಗ ಅಂಕಿತದಲ್ಲಿ ನಮ್ಮ ಮುಂದಿದೆ. ವಚನಗಳು ಬದುಕಿನ ಪಾಠದ ಕೈಗನ್ನಡಿಯಂತೆ ನಮ್ಮ ಭಾವಗಳ ಅನಾವರಣ, ಮನಗಳ ಮುನ್ನುಡಿಯಿದ್ದಂತೆ. ವಚನ ಎಂಬುದು ಮಾತಾದರೂ ಅದಕ್ಕೆ ಒಂದು ಮೌಲ್ಯವಿದೆ, ಪಾವಿತ್ರ್ಯತೆಯಿದೆ. ‘ವಚನ’ ಕೊಡುವುದು, ‘ವಚನ’ದಂತೆ ನಡೆಯುವದು, ‘ವಚನ’ ಪಾಲಿಸುವುದು ಇದರ ಮಹತ್ವ ಸಾರಿದರೆ ‘ವಚನ’ವು ಪದ್ಯವಾಗಿ ನಿಲ್ಲುವದು ಕವಿಯ ಶಕ್ತಿಯನ್ನು ಅವಲಂಬಿಸಿದೆ. ಜನರ ನಡುವೆ ಬದುಕಿ, ಕಾಯಕ ಮೌಲ್ಯವನ್ನು ಎತ್ತಿಹಿಡಿದ ಅನೇಕ ಶರಣರು ಬರೆದ ವಚನಗಳು ನಮ್ಮ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ. ಯಾವ ಅರ್ಥಕೋಶವಿಲ್ಲದೇ, ಯಾರಾದರೂ ತುಂಬಾ ಸುಲಭ, ಸರಳವಾಗಿ ಅರ್ಥೈಸಿಕೊಳ್ಳಬಹುದಾದ ಈ ರಚನೆಗಳು ಬಹುಬೇಗನೆ ನಮ್ಮನ್ನು ಸೆಳೆದುಕೊಳ್ಳುತ್ತವೆ. ಬದುಕಿನ ಪ್ರತಿ ಪಾಠದ ಒಂದು ಅನುಭವವಾಗಿ, ಒಂದು ಮೌಲ್ಯವಾಗಿ ನಿಲ್ಲುವ ವಚನಗಳು ಕನ್ನಡ ಕಾವ್ಯದ ಶಕ್ತಿವಂತ ರಚನೆಗಳು.
ಆಧುನಿಕ ಕಾಲದ ಸಂದರ್ಭ, ಪರಿಸ್ಥಿತಿ, ಬದುಕು, ಬವಣೆ, ಜನರ ಮನೋಸ್ಥಿತಿಯನ್ನು ಕಂಡು ವಿಮುಖಗೊಳ್ಳುವ ಮನಸ್ಸುಗಳನ್ನು ಸರಿದಾರಿಗೆ ತಂದು ಅಂಧಕಾರದ ಮನಸ್ಥಿತಿಗೆ ಬೆಳಕಿನ ಪ್ರತಿಮೆಯಾಗಿ ನಿಲ್ಲುವ ಜ್ಯೋತಿಬಾ ಅವತಾಡೆ ಅವರ ವಚನಗಳು ಸರಳ ರಚನೆಯ ಅತಿ ಸುಂದರ ಪ್ರತೀಕಗಳಾಗಿವೆ.
ಬಸವಾದಿ ಶರಣರ ವಚನಗಳನೋದಿ
ಅರಿತು ನಡೆದರೆ ಗುರುತರವಾದ
ಬದುಕಿನ ದಾರಿ ಖಡಾಖಂಡಿತವಾಗಿ
ಕಂಡೀತೆಂದ ನಮ್ಮ ಜ್ಯೋತಿರ್ಲಿಂಗ
ಬದುಕಿನ ದಾರಿಗೆ ಶರಣರ ವಚನಗಳ ಅರಿವು ನಮ್ಮದಾಗಬೇಕೆನ್ನುವ ಕವಿ ಇಲ್ಲಿ ತಮ್ಮ ವಚನಗಳಲ್ಲಿ ಬದುಕನ್ನು ಹಲವು ಬಗೆಯಲ್ಲಿ ಅರ್ಥೈಸಿದ್ದಾರೆ.
ಎಂದಿಗೂ ಅಂದಾದುಂದಿಯ ಬದುಕು
ಗೆದ್ದಿಲು ಹಿಡಿದ ಬಾಗಿಲು ಪಡಕು
ಬದುಕು ಆದರ್ಶಮಯವಾಗಬೇಕು. ತನ್ನ ಮಿತಿಯನ್ನು ಅರಿತು ಬದುಕಬೇಕು. ಮಿತಿಮೀರಿದ ಬದುಕನ್ನು ಕವಿ ಗೆದ್ದಲು ಹುಳ ಹಿಡಿದ ಬಾಗಿಲಿಗೆ ಹೋಲಿಸಿದ್ದಾರೆ. ಎಷ್ಟೊಂದು ಅರ್ಥಪೂರ್ಣ ಸಾಲುಗಳು.
ಸಾಗುವ ಬದುಕಿಗೆ ಬೇಡ ಬಿಗುಮಾನ
ಬಾಗಿ ನಡೆದರೆ ನೀನು ಬಲುಜಾಣ
ಶರಣರು ಸಾರಿದಂತೆ ಬಾಗಿ ಮಾಗುವ ಚಿತ್ರಣ ಈ ರಚನೆಯಲ್ಲಿದೆ. ಅಹಂಕಾರ, ಬಿಗುಮಾನಗಳು ಮನುಷ್ಯನನ್ನು ಒಂಟಿಯಾಗಿಸುತ್ತವೆ. ಬದುಕಿನ ಸುಖವನ್ನು, ಸಂಭ್ರಮವನ್ನು ಹಂಚಿಕೊಳ್ಳದೇ ಮರಗುವ ಸ್ಥಿತಿ ತಂದೊಡ್ಡುತ್ತವೆ. ಬಳಗದಲ್ಲಿ ಬಾಗಿ ಮನವನ್ನು ಗೆಲ್ಲಬೇಕೆಂದು ಕವಿ ಸಾರಿದ್ದಾರೆ.
ಬದುಕು ಕವಿಗೆ ಬಹಳಷ್ಟು ಕಾಡಿದೆ. ಈ ಸಂಕಲನದ ಬಹುತೇಕ ರಚನೆಗಳು ಬದುಕನ್ನು ಕಂಡರಿಸಿವೆ. ‘ಕಲ್ಲು ಮುಳ್ಳಿನದು ಬದುಕಿನ ದಾರಿ’, ನಂಬಿ ನಡೆಯದಿದ್ದರೆ ತುಂಬಿದ ಬದುಕೆಲ್ಲ ಭಂಗವಾಗಿ ನಿನ್ನ ಬಂಗಾರದ ಬಿಂದಿಗೆ ಬುಡಮೇಲು, ಲಂಗುಲಗಾಮಿಲ್ಲದ ಬದುಕಿನ ಹೊತ್ತು, ಕನ್ನಡಿ ಕೈಯೊಳಗೆ ಸಿಕ್ಕ ಮಂಗನ ಗತ್ತು, ಮುಟ್ಟಲು ಬದುಕಿನ ಘಟ್ಟ ಬೇಕು ದಿಟ್ಟ ಎದೆಗಾರಿಕೆ, ಬೇಕು ಬೇಡಿಕೆಗಳ ಒಲವಿನ ಗೆಲುವೇ ಬದುಕಿನ ಸುಖವು, ಮಳ್ಳನೇನರಿಯುವನು ಬದುಕಿನ ಕಲೆಯ, ಬಾಳಿ ಬದುಕಾಕ ಅರಮನೆಯ ಸಿರಿಯ ಯಾಕ ಬೇಕು. ತಾಳ್ಮೆಯ ಗುಣವೇ ಸಾಧಕ ಬದುಕಿನ ತಾಳಿ, ತಾನು ದುಡಿದು ಮಾಡುವ ಅಡಿಗೆಯ ಸೊತ್ತು, ತನ್ನ ಸಾಧಕ ಬದುಕಿನ ಮುನ್ನಡೆಯ ಸಿರಿ ತುತ್ತು. ಹೀಗೆ ಬದುಕನ್ನು ಹಲವು ವಿಧದಲ್ಲಿ ರೂಪಿಸಿದ ಕವಿ ಕೊನೆಯಲ್ಲಿ ಹೇಳುತ್ತಾರೆ, ಬದುಕಲು ಅರಿಯದಿದ್ದರೆ ಜ್ಯೋತಿರ್ಲಿಂಗನೆಂತು ಒಲಿಯುವನಯ್ಯ, ಜ್ಯೋತಿಲಿಂಗನನ್ನು ಮರೆತು ನಡೆದರೆ ಗತಿ ಕಾಣದೇ ತನ್ನ ಬದುಕೇ ಆಗುವದು ಮೂರಾಬಟ್ಟೆ. ಜ್ಯೋತಿರ್ಲಿಂಗನನ್ನು ಭಜಿಸಿ ಬದುಕಿದರೆ ಸ್ವರ್ಗವು ಕಾಣಲು ಮೂರೇ ಗೇಣು. ಹೀಗೆ ಶರಣರು ಸಾರಿದಂತೆ ಅರಿವು ನಮ್ಮ ಗುರುವಾದ ಮೌಲ್ಯವನ್ನು ಬಹುವಿಧದಲ್ಲಿ ಕವಿ ಜ್ಯೋತಿಬಾ ಅವತಾಡೆಯವರು ಸಾರಿದ್ದಾರೆ.
ವಚನಗಳು ಪರ್ಯಾಯವಾಗಿ ಗಾದೆಗಳಾಗಿ ಗುರುತಿಸಿಕೊಳ್ಳುತ್ತವೆ. ಜನಸಾಮಾನ್ಯರು ತಮ್ಮ ಬದುಕಿನ ಅನುಭವಗಳಿಂದ ಠಂಕಿಸಿದ ಗಾದೆಗಳು ಜನಪದ ಗೀತೆಗಳಲ್ಲಿ, ವಚನಗಳಲ್ಲಿ ಧಾರಾಳವಾಗಿ ಬಳಕೆಯಾಗಿವೆ. ಇಲ್ಲೂ ಕವಿ ಅವತಾಡೆ ಅವರು ತಮ್ಮ ರಚನೆಗಳಲ್ಲಿ ಪ್ರಚಲಿತ ಗಾದೆಗಳನ್ನು ಬಳಸಿಕೊಳ್ಳುವ ಜೊತೆಗೆ ಹೊಸ ಹೊಸ ಗಾದೆ ಮಾತುಗಳನ್ನು ಸೃಷ್ಟಿಸಿದ್ದಾರೆ. ‘ಮೊಲವೆದ್ದಾಗ ನಾಯಿ ಹೊರಗೆ ಹೋದಂತೆ’, ‘ಕುಳಿತು ಉಂಡರೆ ಸಿರಿತನದ ಕೇಡು’, ‘ಜಡೆ ಹಾಕಿದರೆ ತಡಿಕೆ’, ‘ಕ್ರೋಧಿಗಳ ಮಾತು ಕದನದ ಹೇತು’, ‘ಬಚ್ಚಿಟ್ಟ ತಟ್ಟೆ ಅನ್ನ ಹಳಸಿತ್ತು’, ‘ಅತಿಯಾದ ನಿದ್ರೆ ದಾರಿದ್ರ್ಯದ ಮೂಲ’ ಹೀಗೆ ಅನೇಕ ಹೊಸ ಹೊಸ ಗಾದೆಗಳನ್ನು ಕವಿ ಇಲ್ಲಿ ಕಂಡರಿಸಿದ್ದಾರೆ.
ಒಟ್ಟಾರೆ ಕವಿ ಜ್ಯೋತಿಬಾ ಅವತಾಡೆಯವರು ಸರಳ ರಚನೆ, ಆರ್ಥಪೂರ್ಣ ಭಾವ, ಆದಿಪ್ರಾಸದ ಲಯ, ನೀತಿ ಬೋಧೆ ಮೊದಲಾದ ವಿಶಿಷ್ಟತೆಯ ಮೂಲಕ ತುಂಬಾ ಮೌಲಿಕವಾದ ವಚನಗಳನ್ನು ನಮಗೆ ಕೊಟ್ಟಿದ್ದಾರೆ. ಕನ್ನಡ ಆಧುನಿಕ ವಚನಗಳ ಸಾಲಿಗೆ ‘ವಚನಜ್ಯೋತಿ’ ಭರವಸೆಯ ಬೆಳಕಾಗಿದೆ. ಸರಳ ಜೀವನ, ಆದರ್ಶ ವ್ಯಕ್ತಿತ್ವ, ಕಾಯಕದ ನಡೆಯಿಂದ ಮೌಲ್ಯಯುತವಾದ ಬದುಕು ರೂಪಿಸಿಕೊಂಡ ಕವಿ ಜ್ಯೋತಿಬಾ ಅವತಾಡೆ ಅವರ ರಚನೆಗಳು ಅವರ ವ್ಯಕ್ತಿತ್ವ ದರ್ಶನದ ರಸಗಟ್ಟಗಳಾಗಿವೆ. ಅವರ ರಚನೆಗಳನ್ನು ಓದುವ ಮೂಲಕ ಎಲ್ಲರ ಬದುಕು ಆದರ್ಶಮಯವಾಗಲಿ ಎಂದು ಶುಭ ಹಾರೈಸುತ್ತೇನೆ.
- ಡಾ. ಪ್ರಕಾಶ ಗ. ಖಾಡೆ, ಬಾಗಲಕೋಟ
No comments:
Post a Comment